ಮಯಕಾಫ್‍ಸ್ಕಿ, ವ್ಲಾಡಿಮಿರ್
ರಷ್ಯದ ಕವಿ ಮತ್ತು ನಾಟಕಕಾರ. 1908ರಲ್ಲಿ ಬಾಲ್ಷೆವಿಕರನ್ನು ಸೇರಿದ. 1911ರಲ್ಲಿ ಭವಿಷ್ಯತಾವಾದಿಗಳ ಪರಿಚಯವಾಗಿ ಕಾವ್ಯ ರಚನೆ ಪ್ರಾರಂಭಿಸಿದ. 1917ರ ಕ್ರಾಂತಿಯ ಅನಂತರ ಕೆಲವು ಕಾಲ ಅಸಾಧಾರಣ ಜನಪ್ರಿಯತೆಗಳಿಸಿದ. 1921ರ ತರುವಾಯ ಬರೆದ ವಿಡಂಬನಗಳನ್ನು ಪ್ರಭುತ್ವ ನಿಷೇದಿಸಿತು. 1930ರಲ್ಲಿ ಪ್ರಾಯಶಃ ಪ್ರೇಮಜೀವನದಲ್ಲಿ ನಿರಾಸೆ ಹೊಂದಿ ಈತ ಆತ್ಮಹತ್ಯೆ ಮಾಡಿಕೊಂಡ.

ಮಯಕಾಫ್‍ಸ್ಕಿ ತನ್ನ ಸಾಹಿತ್ಯ ಸೃಷ್ಟಿಯನ್ನು ಇಟಾಲಿಯನ್ "ಭವಿಷ್ಯತಾವಾದಿಗಳ " ಪ್ರಭಾವದಿಂದ ಪ್ರಾರಂಭಿಸಿದ. ಸ್ವಭಾವತಃ ಮೇರೆಯಿಲ್ಲದ ಅಹಂಭಾವ ಇವನದು. ತನ್ನನ್ನೇ ಕುರಿತು 21ನೆಯ ವರ್ಷದಲ್ಲಿ "ವ್ಲಾಡಿಮಿರ್ ಮಯಕಾಫ್‍ಸ್ಕಿ" ಎನ್ನುವ ದುರಂತ ನಾಟಕ ಬರೆದು ಅಭಿನಯ ಮಾಡಿಸಿದ. ನಿಯಮ-ನಿಷೇಧಗಳ ದ್ವೇಷಿ. ರಷ್ಯದಲ್ಲಿ ಬಹುಕಾಲ ನಡೆದು ಬಂದಿದ್ದ ಸ್ವೇಚ್ಛಾಪ್ರಭುತ್ವ, ದಬ್ಬಾಳಿಕೆಗಳ ವಿರುದ್ಧದ ಕ್ರಾಂತಿ ಸಾಹಿತ್ಯದಲ್ಲಿಯೂ ಗತಕಾಲದ ವಿರುದ್ಧ ದಂಗೆಯನ್ನು ಪ್ರೇರೇಪಿಸಿತು. ಪ್ರಾರಂಭದಲ್ಲಿ ಈತನ ಸಾಹಿತ್ಯ ಪುಷ್ಕಿನ್ ಮತ್ತು ಪ್ರತಿಮಾ ವಿಧಾನ-ಅದರ ಅತಿಮಾಧುರ್ಯ, ದೌರ್ಬಲ್ಯ, ಅನುಭಾವಗಳ-ವಿರುದ್ಧದ ಪ್ರತಿಕ್ರಿಯೆ, ಸ್ವಷ್ಟವಾದ, ಸುಲಭವಾಗಿ ಅರ್ಥವಾಗುವ, ವೀರ್ಯವತ್ತಾದ, ಮೈನವಿರೇಳಿಸುವ, ಯಾವ ಒರಟುತನಕ್ಕೂ ಹಿಂದೆಗೆಯದ ಕಾವ್ಯವನ್ನು ಈತ ಸೃಷ್ಟಿಮಾಡಲು ಹೊರಟ. ಉಚ್ಚರಣಾಂಶವನ್ನು ಅವಲಂಬಿಸಿದ ಛಂದಸ್ಸನ್ನು ತೊರೆದು, ಒತ್ತಿಲ್ಲದ ಉಚ್ಚರಣಾಂಶವನ್ನು ಅಲಕ್ಷಿಸಿ ಒತ್ತಿಗೆ ಪ್ರಾಧಾನ್ಯ ನೀಡಿದ. ಒಂದಕ್ಕಿಂತ ಹೆಚ್ಚು ಪದಗಳನ್ನು ಜೋಡಿಸಿದ ಪ್ರಾಸಗಳು, ಭಾಷೆಯ ಒರಟು ಪ್ರಯೋಗ, ಒರಟು ಹಾಸ್ಯ, ಒಂದೊಂದು ಪದಕ್ಕೆ-ಅಷ್ಟೇಕೆ ಪದಗಳನ್ನು ಅಚ್ಚುಮಾಡುವ ಬಗೆಗೆ ಪ್ರಾಧಾನ್ಯ ಅರ್ಧ ಪಂಕ್ತಿಗಳು-ಹೀಗೆ ಎಲ್ಲವನ್ನೂ ಬಳಕೆಗೆ ತಂದ. ಹೊಸ ಹೊಸ ಉಪಮಾನಗಳನ್ನು ಈತ ಬಳಸಿದ್ದಾನೆ. ಅವುಗಳಲ್ಲಿ ಕೆಲವು ಲಕ್ಷ್ಯವನ್ನು ಸೆಳೆಯುವಂಥ ತನ್ನತನವನ್ನು ತೋರುತ್ತವೆ. ಈತ ಉತ್ಟ್ರೇಕ್ಷೆಯನ್ನು ನಿರರ್ಗಳವಾಗಿ ತಂದಿದ್ದಾನೆ.

	ಮಯಕಾಫ್‍ಸ್ಕಿಯದು ಅಳುಕಿಲ್ಲದ ಪ್ರಚಾರಕಾವ್ಯ. ಇದನ್ನು ಇವನೇ ಹೆಮ್ಮೆಯಿಂದ ಸಾರಿದ್ದಾನೆ. ತನ್ನನ್ನು ಚಳವಳಿಕಾರನೆಂದು ಮುಖ್ಯಧ್ವನಿವರ್ಧಕ ಎಂದೂ ಕರೆದುಕೊಳ್ಳುತ್ತಾನೆ. ಆತನು ಆರಿಸುವ ಹೆಸರುಗಳೂ ಭಿತ್ತಿಪತ್ರದ ಘೋಷಣೆಗಳಂಥವು-ದಿ ಕ್ಲೌಡ್ ಇನ್ ಟ್ರೌಸರ್ಸ್ (ಷರಾಯಿ ಧರಿಸಿದ ಮೋಡ), 150 ಮಿಲಿಯನ್, ಇಂಥವು. ಅನುಭಾವ ಸೂಕ್ಷ್ಮತೆಗಳನ್ನು ಉದ್ಧೇಶಪೂರ್ವಕವಾಗಿ ದೂರವಿಟ್ಟ ಐಹಿಕ ಮನೋಧರ್ಮದ ಕಾವ್ಯ ಈತನದು. ಇದನ್ನು ಭಿತ್ತಿ ಪತ್ರದ ಕಾವ್ಯ, ಧ್ವನಿವರ್ಧಕ ಯಂತ್ರದ ಕಾವ್ಯ ಎಂದೂ ಕರೆಯಬಹುದು. ಇದರಲ್ಲಿ ನಯ, ಸಂಸ್ಕøತಿ, ಸಂಯಮಗಳಿಲ್ಲ; ಆದರೆ ಅಸಾಧಾರಣ ಶಕ್ತಿಯುಂಟು. ಮಯಕಾಫ್‍ಸ್ಕಿ ಹೊಸದೊಂದು ಭಾಷಾರೂಪವನ್ನು ಸೃಷ್ಟಿಸಿದ ಎನ್ನಬಹುದು. ಪದಗಳಿಗೆ ಹೊಸ ತೇಜಸ್ಸನ್ನು ನೀಡುವುದರಲ್ಲಿ ಈತನ ಸಮಾನರಿಲ್ಲ. ಒರಟುತನ, ಆಡಂಬರ, ಅಹಂಭಾವಗಳಿದ್ದರೂ ದಬ್ಬಾಳಿಕೆ ಮತ್ತು ಸಾಮಾಜಿಕ ಅನ್ಯಾಯ ಇವನ್ನ ಕಂಡು ಚಿಮ್ಮಿದರೋಷ ಈತನ ಕವನಗಳನ್ನು ಜಾಜ್ವಲ್ಯಮಾನವಾಗಿ ಮಾಡುತ್ತವೆ. 'ಷರಾಯಿ ಧರಿಸಿದ ಮೋಡದಲ್ಲಿ ಇವನ ವೈಯಕ್ತಿಕ ಪ್ರೇಮದ ನಿರಾಸೆ, ಸಾಮಾಜಿಕ ವ್ಯವಸ್ಥೆ ವಿರುದ್ಧದ ದಂಗೆಯ ಮನೋಭಾವ ಇದೆ. ಅತಿ ನವೀನವೂ ಬೃಹದಾಕಾರವೂ ಆದ ಉಪಮಾನಗಳೂ ಪ್ರತಿಮೆಗಳೂ ಪರಿಣಾಮಕಾರಿಯಾಗುತ್ತವೆಂಬುದು ನಿಸ್ಸಂಶಯ. ಅಲ್ಲದೆ ಬಾಹ್ಯವಾಗಿ ಅಸಮಂಜಸವೆಂದು ತೋರಬಹುದಾದ ಪ್ರತಿಮೆಗಳಲ್ಲಿ ಒಂದು ಬಗೆಯ ಭಾವನೆಯ ಒಳಸಾಮರಸ್ಯವನ್ನು ಕವಿ ಸಾಧಿಸಿದ್ದಾನೆ. 'ಸಮರ ಮತ್ತು ಶಾಂತಿ'ಯಲ್ಲಿ ಹೊಸ ಬಗೆಯ ಮಾನವ ವಾಸಿಸುವ ಉತ್ತಮವಾದ, ಶಾಂತಿಮಯವಾದ ಜಗತ್ತಿನ ಕನಸನ್ನು ಕವಿ ಕಂಡಿದ್ದಾನೆ. '150 ಮಿಲಿಯನ್ ಈ ಅಂಕಿ ರಷ್ಯದ ಆಗಿನ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಪಾಶ್ಚಾತ್ಯ ರಾಷ್ಟ್ರಗಳು ಸೋವಿಯತ್ ರಷ್ಯದ ವಿರುದ್ಧ ಹೇರಿದ ನಿಬಂಧನೆಗಳನ್ನು ಹಾಸ್ಯ ಮಾಡುವ ಕೃತಿ ಇದು. ಜನರಿಗೆ ಸುಲಭವಾಗಿ ರಚಿಸಿತು. ಲೆನಿನ್‍ನ ನಿಧನದ ಸಮಯದಲ್ಲಿ 'ಲೆನಿನ್ ಎನ್ನುವ ಕವನ ಈತನ ಪ್ರಚಾರ ಕವನಗಳಲ್ಲಿ ಅತ್ಯುತ್ತಮವಾದುದು. 

	ಮಯಕಾಫ್‍ಸ್ಕಿ ಕಾವ್ಯದಲ್ಲಿ ಕ್ರಾಂತಿಯನ್ನು ಸಾಧಿಸಲು ಪ್ರಯತ್ನಿಸಿದ. ಅನುಭಾವದ ವಿರುದ್ಧ ದಂಗೆಯೆದ್ದು 'ಗುಟರು ಹಾಕುವಷ್ಟು ಸುಲಭವಾದ (ಈತನ ಮೊದಲನೆಯ ಕವನ ಸಂಕಲನದ ಹೆಸರು) ಕವನಗಳ ಸೃಷ್ಟಿಗೆ ಪ್ರಯತ್ನಿಸಿದ. 1937ರ ಹೊತ್ತಿಗೆ ಇವನ ಒರಟುತನ, ಅಸಹನೆಗಳ ವಿರುದ್ಧ ಪ್ರತಿಕ್ರಿಯೆ 'ಮತ್ತೆ ಪುಷ್ಕಿನ್‍ಗೆ ಎನ್ನುವ ಪಂಥಕ್ಕೆ ಎಡೆಕೊಟ್ಟಿತು.
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ